ಪುರಾಣಕಾವ್ಯ - 
ಮಾನವ ಜಾತಿಗಳಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಜನ ಕಥೆಗಳನ್ನು ಪುರಾಣ ಕಾವ್ಯಗಳೆನ್ನುವುದು (ಮಿತ್) ಪಾಶ್ಚಾತ್ಯ ರೂಢಿ. ಪುರಾಣ ಕಾವ್ಯ ನಿಜವಾಗಿ ಅಮಾನುಷ ವ್ಯಕ್ತಿಗಳು ಮೊದಲಾದುವುಗಳಿಂದ ಕೂಡಿದುದಾಗಿಯೂ ಪ್ರಕೃತಿಯ ಗೋಚರಾನುಭವಗಳ ವಿಷಯದಲ್ಲಿ ಜನಾಭಿಪ್ರಾಯವೇನಿದೆ ಎಂಬುದನ್ನು ಹೇಳುವುದಾಗಿಯೂ ಇರುವ ಶುದ್ಧ ಕಾಲ್ಪನಿಕ ಕಥನ. ಇದರಲ್ಲಿ ಚರಿತ್ರೆ ಎಷ್ಟೋ ಕಲ್ಪನೆ ಎಷ್ಟೋ ಎಂದು ಖಚಿತವಾಗಿ ಹೇಳುವುದಕ್ಕಾಗದಂತೆ ಅವು ಹಾಸುಹೊಕ್ಕಾಗಿ ಸೇರಿಕೊಂಡಿರುತ್ತವೆ. ಗ್ರೀಸ್, ಭಾರತ, ಚೀನ ಮುಂತಾದ ದೇಶಗಳ ಇಂಥ ಕಥೆಗಳು ಉದಾಹರಣೆಗಳು. ಜ್ಯೂಸ್, ತೋರೆ, ಇಂದ್ರ, ಹರಿ, ಹರ ಮೊದಲಾದವರ ಕಥೆಗಳು ಈ ಜಾತಿಗೆ ಸೇರಿದಂಥವು. ಪುರಾಣ ಮಹಾಕಾವ್ಯ ಮತ್ತು ಅಭಿಜಾತ ಮಹಾಕಾವ್ಯ ಎಂದು ಕಾವ್ಯಗಳಲ್ಲಿ ಎರಡು ಬಗೆಗಳಿವೆ. ಮೊದಲನೆಯ ಬಗೆಯಲ್ಲಿ ಪುರಾಣ ಕಾವ್ಯಗಳು ಅಡಕವಾಗುತ್ತವೆ. ಇವು ಪದ್ಯ ರೂಪದಲ್ಲಿ ಲಿಖಿತವಾಗಿಯೋ ಮೌಖಿಕವಾಗಿಯೋ ತಲೆಮಾರಿಂದ ತಲೆಮಾರಿಗೆ ನಡೆದು ಬಂದಂಥವು. ಇವುಗಳ ಕಥನಕಾರರು ಇಂಥ ಕಥನವನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡು ಬಂದ ಪೌರಾಣಿಕರು ಭಾರತದಲ್ಲಿರುವಂತೆಯೇ ಐರ್‍ಲೆಂಡ್ ಮತ್ತು ಸ್ಕಾಟ್‍ಲೆಂಡ್‍ಗಳಲ್ಲೂ ಇಂಥ ಪೌರಾಣಿಕರಿದ್ದರು. ಬಾಯಿಂದ ಬಾಯಿಗೆ ನಡೆದು ಬಂದ ಈ ಸಾಹಿತ್ಯ ಪ್ರಕಾರ ಬಹುಕಾಲಾನಂತರ ಲಿಖಿತ ಸಾಹಿತ್ಯ ರೂಪ ಪಡೆಯಿತು.

	ಶುದ್ಧ ಪುರಾಣ, ಇತಿಹಾಸ - ಪುರಾಣ ಮತ್ತು ಜನಪದ ಕಥಾವಳಿ ಎಂದು ಪುರಾಣಕಾವ್ಯಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಶುದ್ಧ ಪುರಾಣಗಳು ಹೆಚ್ಚಾಗಿ ಮತ ಧಾರ್ಮಿಕ ಆಚಾರಗಳನ್ನು ಒಳಗೊಂಡಿರುತ್ತವೆ ; ಜೊತೆಗೆ ಸೃಷ್ಟಿಕ್ರಮ ವಿನ್ಯಾಸದಿಂದ ಹಿಡಿದು ಒಂದು ಬಂಡೆಯ ಆಕೃತಿಯವರೆಗಿನ ವಿಷಯಗಳೂ ಇವುಗಳಲ್ಲಿ ಹೊಂದಿರುತ್ತವೆ. ಪೂಜಿತವಾದ ದೇವತೆಗಳ ಸ್ವರೂಪ - ನಡತೆಗಳನ್ನು ಇಲ್ಲಿ ನಾವು ಕಾಣಬಹುದು. ಇತಿಹಾಸ - ಪುರಾಣವಾದರೊ ಜನಪ್ರಿಯ ಚರಿತ್ರಾತ್ಮಕ ಗ್ರಂಥ. ಜನಮನದಲ್ಲಿ ಸ್ಮøತಿ ರೂಪವಾಗಿ ಉಳಿದಿರುವ ಯುದ್ಧ, ದಂಗೆ, ದಾಳಿ ಮುಂತಾದ ನಿಜಸಂಗತಿಗಳು ಹಿನ್ನೆಲೆಯಲ್ಲಿರುತ್ತವೆ. ಜನಪದ ಕಥಾವಳಿಗೆ ಅಂಥ ಹಿನ್ನೆಲೆ ಇಲ್ಲ. ಅದರ ಮುಖ್ಯೋದ್ದೇಶ ಮನೋರಂಜನೆ. ಆದುದರಿಂದ ಅದು ಇಂದಿನ ಕಾದಂಬರಿ ಅಥವಾ ಸಣ್ಣ ಕಥೆ ಎಂಬ ಸಾಹಿತ್ಯ ಪ್ರಕಾರದ ಅಜ್ಜ ಎನ್ನಬಹುದು. ವಿವಿಧ ದೇಶಗಳ ಜನಪದ ಕಥಾವಳಿಗಳ ಅಭ್ಯಾಸದಿಂದ ಅವುಗಳ ವಸ್ತುಗಳಲ್ಲಿ ಬಹಳ ಸಾಮಾನ್ಯ ಅಂಶಗಳಿವೆ ಎಂದು ತಿಳಿದುಬಂದಿದೆ. ಹೀಗಾಗಲೂ ಕೆಲವೆಡೆ ಜನಾಂಗಗಳಲ್ಲಿಯ ಪರಸ್ಪರ ಸಂಪರ್ಕ ಮತ್ತು ಕೆಲವೆಡೆ ಆಕಸ್ಮಿಕ ಕಲ್ಪನಾಸಾದೃಶ್ಯ ಕಾರಣಗಳಾಗಿವೆ. ಫಿನಿಕ್ ಜನಾಂಗದ ಲ್ಯಾಪ್ ಎಂಬ ಜನತೆಯಲ್ಲಿ ಆಡಿಸೀಯ ನೇರವಾದ ಸಂಪರ್ಕವಿಲ್ಲದ್ದಾಗಲೂ ಹೋಮರನ ಅಡಿಸಿಯೆಸ್ ಮತ್ತು ಸೈಕ್ಲೋಪುಗಳ ಕಥೆಯಂಥ ಕಥೆಗಳು ಪ್ರಚುರವಾಗಿದ್ದವು. ಪರೋಪಕಾರವನ್ನು ಗೌರವಿಸುವ ಮತ್ತು ವ್ಯಕ್ತಿಯ ಬಯಕೆಗಳನ್ನು ಇಂದ್ರಜಾಲಾದಿ ಅದ್ಭುತ ಸಾಧನಗಳಿಂದ ಈಡೇರಿಸಿಕೊಳ್ಳುವ ಈ ಬಗೆಯ ಕಥಾವಸ್ತುಗಳು ಮಾನವ ಸಹಜವಾದ ಮನೋರಸ ಮತ್ತು ಆಸೆಪಾಸೆಗಳಿಂದ ಹುಟ್ಟುತ್ತವೆ. 

	ಶುದ್ಧ ಪುರಾಣ ಯಾವಾಗಲೂ ಐಂದ್ರಜಾಲಿಕ ಮತ್ತು ಮತಧಾರ್ಮಿಕ ಪೂಜೆ ಪುನಸ್ಕಾರಗಳನ್ನು ಒಳಗೊಂಡಿರುತ್ತದೆ. ಮಾಟ-ಮಾಯೆಗಳು ಐಂದ್ರಜಾಲಿಕ. ಅವು ಮತ ಧಾರ್ಮಿಕ ಉಪಾಸನೆಗಳ ಅವಿನಾವಿ ಅಂಗ. ಅದು ಜನರಿಗೆ ಸೃಷ್ಟಿಯಾದದ್ದು ಹೇಗೆ ಮತ್ತು ಸೃಷ್ಟಿಯ ಕ್ರಮಬದ್ಧತೆ ಅಳಿಯದಂತೆ ಮತ್ತು ಜನಜೀವನ ವೃದ್ಧಿ ಹೊಂದುವಂತೆ ಮಾಡುವುದು ಹೇಗೆ ಎಂಬ ಸಂಗತಿಗಳನ್ನು ತಿಳಿಸುತ್ತದೆ ಎಂಬುದು ಒಂದು ಅಭಿಪ್ರಾಯ. ಅದರ ವಾಚನ - ಶ್ರವಣಗಳು ಉಕ್ತ ಫಲಗಳನ್ನು ಕೊಡುತ್ತವೆ ಎಂಬುದು ಇನ್ನೊಂದು ಅಭಿಪ್ರಾಯ. ಹೀಗಾಗಿ ಅವು ಉಪಾಸನೆಯ ಅಥವಾ ವ್ರತದ ಭಾಗಗಳಾಗಿರುತ್ತವೆ. ಹೀಬ್ರು ಮತ್ತು ಗ್ರೀಕ್ ಪುರಾಣಗಳನ್ನೆಲ್ಲವಾದರೆ ಭಾರತದ ಪುರಾಣ - ಪುಣ್ಯಕಥೆಗಳನ್ನು ಮೇಲಿನ ಅಭಿಪ್ರಾಯ ನಿದರ್ಶನಗಳನ್ನಾಗಿ ಕೊಡಬಹುದು. ಗ್ರೀಕ್ ಪುರಾಣದಲ್ಲಿ ಧಾನ್ಯಾದಿಷ್ಟಾನದೇವತೆ ಡಿಮೀಟರಳ ಮಗಳನ್ನು ಹೊತ್ತುಕೊಂಡು ಹೋದದ್ದು ಹೇಡೀಸ್ ಎಂಬ ಪಾತಾಳ ಲೋಕದ ದೇವತೆ - ತಾಯಿಯೊಡನೆ ಅವಳ ಪುನರ್ಮಿಲನವಾಗುವುದು. ಇದು ಗ್ರೀಕರ ಉಪಾಸನೆಯೊಂದಕ್ಕೆ ಸಂಬಂಧಿಸಿದ್ದು. ಕ್ರಿ.ಪೂ. 6 ನೆಯ ಶತಮಾನಕ್ಕೆ ಸೇರಿದ ಹೋಮರಿಕ್ ಸೂಕ್ತದಲ್ಲಿ ಬರುವ ಈ ಕಥೆಯನ್ನು ಕ್ರಾಂತಿಕಾರಕ ಅದ್ಭುತ ನಾಟಕದಲ್ಲಿ ಸಾಭಿನಯ ನೃತ್ಯದಿಂದ ಅಥವಾ ಇತರ ಕಲಾ ಮಾಧ್ಯಮದಿಂದ ಸೂಚಿಸಲಾಗುತ್ತಿತ್ತೆಂದು ತರ್ಕಿಸಲಾಗಿದೆ. ಆದರೆ ಗ್ರೀಕ್ ಪುರಾಣಗಳು ತಮ್ಮ ಶುದ್ಧ ರೂಪದಲ್ಲಿ ಹೆಚ್ಚಾಗಿ ವ್ರತಗಳ ವಿವರಣೆಗಳಾಗಿದ್ದವಲ್ಲದೆ ಅವುಗಳ ಅವಿಭಾಜ್ಯ ಅಂಗವಾಗಿದ್ದಿಲ್ಲ. ರೋಮಿನಲ್ಲಿ ಬಹಳ ವೃತ-ನಿಯಮ ಉಪವಾಸಾದಿಗಳಿದ್ದರೂ ಅದರದೇ ಆದ ಅನನ್ಯ ಶುದ್ಧ ಪುರಾಣಗಳ ರಚನೆಯನ್ನದು ಮಾಡಿಕೊಂಡಿದ್ದಿಲ್ಲ.

	ಭೂಮ್ಯಾಕಾಶಗಳು ಸತಿಪತಿಗಳೆಂಬ ಪುರಾಣ ಕಥೆ ಗ್ರೀಸಿನಿಂದ ನ್ಯೂಜಿûಲೆಂಡಿಗೆ ಹೋಗಿದೆ. ಆಕಾಶವಿಲ್ಲಿ ಸ್ವರ್ಗ. ಮಾಟ-ಮೋಡಿಗಳಲ್ಲಿ ಪೌರಾಣಿಕ ಕಥನವಿರುವುದು ಅನೇಕ ಜನಾಂಗಗಳಲ್ಲಿ ಕಂಡುಬಂದಿದೆ. ಫಿನ್‍ಲೆಂಡಿನ ಜನರ ಕಾಲೇವಾಲದಲ್ಲಿ ಬರುವ ವೈನಮೀನೆನ್ ಎಂಬ ಪಾತ್ರ ಕಬ್ಬಿಣದ ಆಯುಧವೊಂದರಿಂದ ಗಾಯ ಹೊಂದಿ ಅದನ್ನು ಗುಣ ಮಾಡುವ ಭೇಷಜದ ಅಂಗವಾಗಿ ಬಂದು ಆ ಲೋಹದ ಉತ್ಪತಿಯನ್ನು ಹೇಳುತ್ತದೆ. ಇಂಥ ಬೇಷಜ ಪ್ರಯೋಗ ಸಾಮಾನ್ಯವಾಗಿ ಅದ್ಭುತಶಕ್ತಿಯಿಂದ ಸಂಭವಿಸುವಂಥದಾಗಿರುತ್ತದೆ.

	ಕಲ್ಪನಾ ಪ್ರಧಾನವಾದ ಶುದ್ಧ ಪುರಾಣಗಳು ಅಂಥ ಇತರ ಸಾಹಿತ್ಯ ಕೃತಿಗಳಿಗೆ ವಸ್ತುಗಳಾಗುತ್ತವೆ. ಅದರಿಂದ ಮೂಲಪುರಾಣಕ್ಕೂ ಅದಕ್ಕೆ ಸಂಬಂಧಿಸಿದ್ದ ವ್ರತಕ್ಕೂ ಇರುವ ಸಂಬಂಧ ಕಡಿದು ಹೋಗುತ್ತದೆ. ಬರಹಗಾರರು ಪುರಾಣ ವಸ್ತುಗಳನ್ನು ತಮಗೆ ಉಚಿತ ಕಂಡ ಅಲಂಕಾರಿಕ ನೀತಿಯಂತೆ ತಮ್ಮ ಮಹಾಕಾವ್ಯಗಳ ಉಪಕರಣಗಳನ್ನಾಗಿ ಬಳಸಿಕೊಂಡಿದ್ದಾರೆ. ಇತಿಹಾಸ ಪುರಾಣಗಳ ಮತ್ತು ಜನಪದ ಕಥಾವಳಿಗಳ ವಸ್ತುಗಳನ್ನು ಲೇಖಕರು ಹಾಗೆ ಬಳಸಿಕೊಂಡದ್ದುಂಟು. ವ್ಯಾಪಾರಿಗಳ ಇಲ್ಲವೇ ಕಡಲುಗಳ್ಳರ ಸಮುದ್ರ ಪ್ರಯಾಣದ ಹಿನ್ನೆಲೆಯನ್ನುಳ್ಳದ್ದೆಂದು ತೋರುವ ಜೇಸನ್ ಮತ್ತು ಅರ್ಗೋನಾಟರ ಕಥೆ ಆ ಪ್ರಕಾರ ಉಪಯುಕ್ತವಾಗಿದೆ.

	ಪುರಾಣಗಳ ಸತ್ಯತೆಯ ಬಗೆಗೆ ವಿವಿಧ ವಾದಗಳಿವೆ. ವಿಚಾರವಾದಿಗಳ ಪ್ರಕಾರ ನಂಬಲರ್ಹವಲ್ಲದ ಅಂಶಗಳನ್ನು ಅವುಗಳಿಂದ ತೆಗೆದು ಹಾಕಿ ಮಿಕ್ಕ ಅಂಶಗಳನ್ನು ಸ್ವೀಕಾರ ಮಾಡಬಹುದು. ಆ ವಿಚಾರಬದ್ದ ಅಂಶಗಳನ್ನು ಸಂದಿಗ್ಧ ಒಕ್ಕಣೆಯ ಅಥವಾ ರೂಪಕ ಮೊದಲಾದ ಅಲಂಕಾರದ ಅಪಾರ್ಥಗಳೆಂದೂ ಶುದ್ಧ ಕಲ್ಪನಾ ವಿಲಾಸವೆಂದೋ ಗ್ರಹಿಸುವುದಂತೂ ಸರಿಯೇ. ಉತ್ತರಮಾರುತನಾದ ಬೊರೀಅಸ್ ಒರೀತಿಯ ಎಂಬ ರಾಜಕುಮಾರಿಯನ್ನು ಅಪಹರಣ ಮಾಡಿದ್ದು ಬಿರುಗಾಳಿಗೆ ಸಿಕ್ಕಿ ಆಕೆ ಸತ್ತದ್ದನ್ನು ಹೇಳುತ್ತದೆ - ಎಂಬುದು ದೃಷ್ಟಾಂತ.

	ಕ್ರಿ. ಪೂ. 2 ಅಥವಾ 4 ನೆಯ ಶತಮಾನದ ಮೆಸೀನೀಯಲ್ಲಿದ್ದ ಯೂಹಿಮೆರಸ್ಸನ ಪ್ರಕಾರ 2 ಸಂಭಾವ್ಯತೆಗಳನ್ನು ಈ ಸಂದರ್ಭದಲ್ಲಿ ನೆನೆದುಕೊಳ್ಳಬಹುದು. 1. ಕವಿಗಳ ಪುರಾಣ ಕಾವ್ಯಗಳಲ್ಲಿಯ ಮಹಾಪಾತ್ರಗಳನ್ನು ಬಳಸಿಕೊಂಡಾಗ ಅವುಗಳಲ್ಲಿಯ ದೇವತ್ವವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಕಿತ್ತೊಗೆದು ಅದನ್ನು ಮನುಷ್ಯತ್ವಕ್ಕೆ ಇಳಿಸಿರಬಹುದಾಗಿದೆ ; ಇದು ಸಾಹಿತ್ಯಕ ಪ್ರಯೋಗ ; 2. ಜೀವವಿರುವಾಗಲೂ ಸತ್ತ ಮೇಲೆಯೋ ಕೆಲವು ದೊಡ್ಡ ದೊಡ್ಡ ರಾಜ ಮಹಾರಾಜರಿಗೆ ದೈವತ್ವವನ್ನು ಅಂಟಿಸಲಾಗಿದೆ. ಇದು ರಾಜಕೀಯ ಪ್ರಯೋಗ ಸಾಂಪ್ರದಾಯಿಕ ದೇವತೆಗಳೆಷ್ಟೋ ಹೀಗೆ ರಾಜತ್ವದಿಂದ ದೇವತ್ವಕ್ಕೆ ಏರಿದವು.

	ಬಹಳ ಹಿಂದೆಯೇ ಕೆಲವು ವಿದ್ವಾಂಸರು ಶುದ್ಧ ಪುರಾಣಗಳು ಸಮಾಸೋಕ್ತಿಗಳು ಅಥವಾ ಅನ್ಯೋಕ್ತಿಗಳು ಎಂದದ್ದುಂಟು. ಅವರ ಪ್ರಕಾರ ಅವು ತತ್ತ್ವಶಾಸ್ತ್ರೀಯ ಅಂಶಗಳನ್ನು ಒಳಗೊಂಡಿರುತ್ತವೆ ; ಅವುಗಳಲ್ಲಿಯ ನಂಬಲನರ್ಹವಾದ ಅಂಶಗಳು ಕುತೂಹಲವನ್ನು ಕೆರಳಿಸಿ ಅವುಗಳ ಹಿನ್ನೆಲೆಯಲ್ಲಿರುವ ಆಧಾರ ಸತ್ಯಗಳನ್ನು ಶ್ರಾವಕರು ಶೋಧ ಮಾಡಲು ಪ್ರೇರಿಸುತ್ತವೆ. ಅನ್ಯೋಕ್ತಿ ವಿಧಾನ ಭೌತಿಕ ಮತ್ತು ಅತಿಭೌತಿಕ (ಅಥವಾ ದೈವಿಕ) ಎಂದು ಎರಡು ವಿಧ. ಗ್ರೀಸಿನ ಹೀರ ವಾಯುದೇವತೆ ಅವಳ ಗಂಡ ಜ್ಯೂಸ್ (ಸ್ವರ್ಗ ಅಥವಾ ಆಕಾಶ). ರೋಮನ್ನರ ಎಲ್ಲ ದೇವತೆಗಳೂ ಸೂರ್ಯನ ಅಂಶಗಳು. ರೋಮನ್ ನಿರಂಕುಶ ಪ್ರಭುವಿರುವುದು ಭೂಮಿಯಲ್ಲಿ ; ದೇವತೆಗಳ ನಿರಂಕುಶ ಸಾರ್ವಭೌಮ ಸೂರ್ಯ. ಭೂತಶಕ್ತಿಗಳ ದೈವೀಕರಣ ಇಲ್ಲಿದೆ. ಗ್ರೀಕ್ ಪೌರಸ್ತ್ಯ ಮಹಾಮಾತೆ ಮತ್ತು ಅವಳ ಪ್ರಿಯತಮ ಅತ್ತಿಸ್ಸರ ಕಥೆ ಅವಳ ದೇವತ್ವವನ್ನು ಅಥವಾ ಅವಳ ಪೂಜೆಗೆ ಸಂಬಂಧಿಸಿದ ವ್ರತ - ನಿಯಮ ಉಪವಾಸಾದಿಗಳನ್ನು ಸಮರ್ಥಿಸುವ ವಿವರಗಳಿಂದೊಡಗೂಡಿದೆ. ಇದು ಸಲ್ಲಸ್ತಿಸ್ ಕ್ರಿ. ಶ. 4 ನೆಯ ಶತಮಾನದಲ್ಲಿ ವಿವರಿಸಿದ ಅನ್ಯೋಕ್ತಿ ವಿಧಾನದ ಅತಿಭೌತಿಕ (ಅಥವಾ ದೈವಿಕ, ದೇವತಾ ಶಾಸ್ತ್ರೀಯ) ಪದ್ಧತಿಗೆ ನಿದರ್ಶನವಾಗುತ್ತದೆ. ಕ್ರಿ.ಶ. 1771-1858 ರ ನಡುವೆ ಇದ್ದ ಜಾರ್ಜ್ ಫ್ರೆಡ್ರಿಚ್ ಕ್ರೋಜûರ್ ಇಂಥ ಪದ್ಧತಿಯಂತೆ ಪುರಾಣಗಳ ಅರ್ಥವನ್ನು ವಿವರಿಸಿದ. ಆದರೆ ಇದು ಅಷ್ಟೇನೂ ಸರಿಯಲ್ಲವೆಂದು ಮೂಲ ಪುರಾಣಕರ್ತರು ಸರ್ವರಿಗೂ ಸಾಧಾರಣವಾಗುವಂತೆ ಮತಧಾರ್ಮಿಕ ಅಂಶಗಳನ್ನು ಪ್ರತೀಕಗಳಲ್ಲಿ ಹೇಳಿದ್ದೂ ಅನಂತರ ವಿವಿಧ ಅಪಾರ್ಥಗಳಿಗೆಡೆಕೊಟ್ಟಿತೆಂದೂ ಆತ ಕ್ರಮೇಣ ಅರಿತ. ಅವು ಅಷ್ಟು ಸಮರ್ಥನೀಯವಾಗದು ಎನ್ನುವವರೂ ಇದ್ದಾರೆ. ಏಕೆಂದರೆ ಈ ಯೆನಸೇನ್ ಹೇಳುವಂತೆ ಉಕ್ತ ಪುರಾಣಿಕರು ತಮ್ಮ ಸುತ್ತಮುತ್ತಲಿನ ಆಜ್ಞೆಯ ಘಟನೆಗಳ ಬಗೆಗೆ ಊಹಿಸಿದ ಹಿನ್ನೆಲೆಯ ದರ್ಶನಗಳಷ್ಟೆ ಅವು ಆಗಿರಬಹುದಾದ ಸಂಭವ ಹೆಚ್ಚು. ಈ ದರ್ಶನಗಳು ಅನಂತರದ ವೈಜ್ಞಾನಿಕ ಮತ್ತು ತತ್ತ್ವಶಾಸ್ತ್ರೀಯ ವಿಚಾರಗಳ ಮೂಲ ಆಕಾರಗಳಾಗಿದ್ದುಂಟು. ವೈಜ್ಞಾನಿಕ ಅಥವಾ ತತ್ತ್ವಶಾಸ್ತ್ರೀಯ ಶಬ್ದಭಂಡಾರವಿಲ್ಲದ ಪ್ರಾಚೀನ ಕಾಲದಲ್ಲಿ ಪುರಾಣಿಕರು ಪ್ರತೀಕ ಸ್ವರೂಪದ ಅಲಂಕಾರೋಕ್ತಿಗಳಿಂದ ತಮ್ಮ ಕಾಣಿಕೆಯನ್ನು ಜನರಿಗೆ ತಿಳಿಸಿರುವುದು ಸಂಭವ.

	ಕ್ರಿ. ಶ. 1781-1860 ರ ನಡುವೆ ಇದ್ದ ಸೀ. ಎ. ಲೋಬೆಕ್ ಆರಂಭಿಸಿದ ಶೋಧವನ್ನು ಮ್ಯಾಕ್ಸ್‍ಮುಲ್ಲರನ ನಿಸರ್ಗಪುರಾಣ ಪ್ರಸ್ಥಾನ ಪರಿಷ್ಕರಿಸಿ ಮುಂದುವರಿಸಿತು. 1856 ರಿಂದ 1892 ರ ವರೆಗೆ ಮ್ಯಾಕ್ಸ್‍ಮುಲ್ಲರನ ಪ್ರಸಿದ್ಧ ಕೃತಿಗಳು ಪ್ರಕಟವಾದವು. ಸಂಸ್ಕøತ ವಾಜ್ಮಾಯದಲ್ಲಿದ್ದ ಪುರಾಣಗಳನ್ನು ಎತ್ತಿಕೊಂಡು ಆತ ಪ್ರಾಚೀನ ಭಾಷೆಯ ಬಗೆಗಿನ ಸಿದ್ಧಾಂತವನ್ನು ಆಧರಿಸಿದ ತನ್ನ ನೈರುಕ್ತಕ ಸಮಸೂತ್ರದ ಪ್ರಕಾರ ಅಭಿಜಾತ-ಅಭಿಜಾತೇತರ ಪುರಾಣ ಸಾಮಗ್ರಿಯಲ್ಲಿ ಹಲವಾರನ್ನು ಅರ್ಥೈಸಿದ. ಪ್ರಾಚೀನ ಶಬ್ದ ಭಂಡಾರದಲ್ಲಿ ವಿವಿಧ ಅಸಮರ್ಪಕ ಪದಗಳಿದ್ದುದರಿಂದ ಅವುಗಳನ್ನು ಬಳಸಿ ರಚಿಸಿದ ಪುರಾಣಕಾವ್ಯಗಳು ಬಹಳ ಅಪಾರ್ಥಗಳಿಗೆಡೆಗೊಟ್ಟುವು ಎಂಬುದು ಅವನ ಮತ. ಅವನ ಪ್ರಕಾರ ಪುರಾಣವೊಂದು ಭಾಷೆಗೆ ಹಿಡಿದ ರೋಗ : ಅಂಥವುಗಳಲ್ಲಿರುವುದು ಮುಖ್ಯವಾಗಿ ಆಕಾಶದಲ್ಲಿಯ ಘಟನೆಗಳ ಅಲಂಕಾರಿಕ ವರ್ಣನೆ. ಕೆ. ಒ. ಮುಲ್ಲರ್ ಮುಂತಾದವರು ಅಭಿಲೇಖಗಳ ಪರಾಮರ್ಶೆಯ ಪದ್ಧತಿಯನ್ನು ಅನುಕರಿಸಿದರು. ಅದರ ಪ್ರಕಾರ ಒಂದು ಪುರಾಣ ಪ್ರಾಚೀನ ಅಪ್ರಬುದ್ಧ ಮನಸ್ಸಿನ ಫಲವೊ ಅಥವಾ ಪ್ರಬುದ್ಧ ಮನಸ್ಸಿನ ಕಲ್ಪನಾಶಕ್ತಿಯ ಫಲವೊ ಎಂಬುದನ್ನು ತಿಳಿಯಲು ದೇಶ-ಕಾಲಗಳ ಯಥಾವತ್ತಾದ ಜ್ಞಾನ ಅಗತ್ಯ. ಈ ವಿಚಾರದಂತೆ ವೇದವಾಜ್ಮಯದಲ್ಲಿಯ ಪೌರಾಣಿಕ ಅಂಶಗಳು ಹಳೆಯವುಗಳಾದರೂ ಅಪ್ರಬುದ್ಧವಲ್ಲ ಎಂದು ಜಗತ್ತು ಅರಿತುಕೊಳ್ಳುವಂತಾಯಿತು.

	ಓವಿಡ್ಡನಲ್ಲಿಯ ಆ ಈ ವಿಕಟಕಥೆ ಅಥವಾ ಆರ್ಕೇಡಿಯದ ಯಾವುದಾದರೊಂದು ಸ್ಥಳಪುರಾಣ (ಇತಿಹಾಸ ಪುರಾಣ) ಒಂದು ಮಟ್ಟದ್ದಾದರೆ, ಹೋಮರನ ಕೃತಿಗಳಲ್ಲಿಯ ಪುರಾಣ ಪ್ರಪಂಚದ ಮಟ್ಟ ಇನ್ನೊಂದು ಎಂಬುದು ಅದರಿಂದ ಸ್ಪಷ್ಟವಾಯಿತು. ಪುರಾಣಗಳ ತುಲನಾತ್ಮಕ ಸಂಶೋಧನ ಪದ್ಧತಿಯಿಂದ ಜೆ. ಮತ್ತು ಡಬ್ಲ್ಯೂ. ಗ್ರಿಮ್ ಸಹೋದರರ ಜನಪದ ಕಥಾವಳೀ ಸಂಕಲನ ಪ್ರಕಟವಾಯಿತು. 1950 ರಲ್ಲಿ ಕಾರ್ಲ್ ಜಿ. ಯೂಂಗ್ ಮಹಾಶಯನ ಮನೋವಿಶ್ಲೇಷಣಾತ್ಮಕ ಪದ್ಧತಿ ಪ್ರಚುರವಾಯಿತು. ಅದರ ಪ್ರಕಾರ ಕೆಲವು ಮಾದರಿಯ ಸ್ವಪ್ನಗತ ಸನ್ನಿವೇಶ ಮತ್ತು ಆಕೃತಿಗಳು ಕೆಲವು ಪುರಾಣಗಳ ಹೂರಣಗಳಿಗೆ ಸದೃಶವಾಗಿ ತೋರಿದವು. ಆದುದರಿಂದ ಅಂಥ ಪುರಾಣ ಕಲ್ಪನೆಗಳು ಅಧಿಪ್ರಜ್ಞೆಯಿಂದ ಅಥವಾ ಅವಪ್ರಜ್ಞೆಯಿಂದ ಜಾಗೃತ ಮನಸ್ಸಿನಲ್ಲಿ ಮೂಡಿದ, ಮಾನವ ಸಾಮಾನ್ಯವಾದ ಸಾಮೂಹಿಕ ಅಧಿಪ್ರಜ್ಞೆಯ ಬೀಜರೂಪದ ಬಿಲ್ಲೆಗಳು ಎಂದು ನಿರ್ಧರಿಸಲಾಯಿತು.

	ಸಂಸ್ಕøತದಲ್ಲಿ ರಾಮಾಯಣ-ಮಹಾಭಾರತಗಳೆಂಬ ಸುಪ್ರಸಿದ್ಧ ಇತಿಹಾಸ ಪುರಾಣಗಳಲ್ಲದೆ ಸುಮಾರು ನೂರಕ್ಕೂ ಮಿಕ್ಕುವ ಉಪಪುರಾಣಗಳು 18 ಮಹಾಪುರಾಣಗಳು ಇವೆ. ಕನ್ನಡದಲ್ಲಿ ಜೈನಕವಿಗಳು ತಮ್ಮ ತೀರ್ಥಂಕರರ ಬಗೆಗೆ ಪುರಾಣ ಕಾವ್ಯಗಳನ್ನು ಮಾದರಿಯಾಗಿ ಮೊಟ್ಟಮೊದಲು ಚಂಪು ರೂಪದಲ್ಲಿ ಬರೆದಿದ್ದಾರೆ. ಆದಿಪಂಪನ (ಸುಮಾರು ಕ್ರಿ. ಶ. 941) ಆದಿಪುರಾಣ ಆದಿ ತೀರ್ಥಂಕರನಾದ ಪುರುದೇವನ ಚರಿತ್ರೆಯನ್ನು ಹೇಳುತ್ತದೆ. ಪೊನ್ನ (ಕ್ರಿ. ಶ. 950) 16 ನೆಯ ತೀರ್ಥಂಕರನಾದ ಶಾಂತಿನಾಥನ ಚರಿತವನ್ನು ಶಾಂತಿಪುರಾಣದಲ್ಲಿ ಬರೆದಿದ್ದಾನೆ. ರನ್ನ (993) 2 ನೆಯ ತೀರ್ಥಂಕರನಾದ ಅಜಿತನಾಥನ ಚರಿತೆಯನ್ನು ತನ್ನ ಅಜಿತಪುರಾಣದಲ್ಲಿ ಹೇಳಿದ್ದಾನೆ. ಜನ್ನ (1209) 14 ನೆಯ ತೀರ್ಥಂಕರನಾದ ಅನಂತನಾಥನ ಚರಿತವನ್ನು ಬಣ್ಣಿಸಿದ್ದಾನೆ. ಚಾವುಂಡರಾಯ (978) ಚಾವುಂಡರಾಯಪುರಾಣವನ್ನು ರಚಿಸಿದ್ದಾನೆ. ಇದು ಚತುರ್ವಿಂಶತಿ ತೀರ್ಥಂಕರರ ಚರಿತ. ಅದಕ್ಕೆ ತ್ರಿಷಷ್ಟಿಲಕ್ಷಣ ಮಹಾಪುರಾಣವೆಂಬುದು ಇನ್ನೊಂದು ಹೆಸರು. ಕರ್ಣಪೌರ್ಯ (1140) 22 ನೆಯ ತೀರ್ಥಂಕರನಾದ ನೇಮಿನಾಥನ ಚರಿತವನ್ನು ನೇಮಿನಾಥ ಪುರಾಣದಲ್ಲಿ ಬರೆದ. ಪದ್ಮಣಾಂಕ (1385) ಕೆರೆಯ ಪದ್ಮರಸನ ಚರಿತವನ್ನು ಪದ್ಮರಾಜ ಪುರಾಣದಲ್ಲಿ ಕೊಟ್ಟಿದ್ದಾನೆ. ಪಾಶ್ರ್ವಪಂಡಿತ (1205) 23 ನೆಯ ತೀರ್ಥಂಕರನಾದ ಪಾಶ್ರ್ವನಾಥನ ಚರಿತ್ರೆಯನ್ನು ಪಾಶ್ರ್ವನಾಥ ಪುರಾಣದಲ್ಲಿ ಚಿತ್ರಿಸಿದ್ದಾನೆ. 2 ನೆಯ ಗುಣವರ್ಮನ (1235) 9 ನೆಯ ತೀರ್ಥಂಕರನಾದ ಪುಷ್ಪದಂತನ ಚರಿತವನ್ನು ಪುಷ್ಪದಂತ ಪುರಾಣದಲ್ಲಿ 14 ಆಶ್ವಾಸಗಳಲ್ಲಿ ಬರೆದಿದ್ದಾನೆ.

	ಕೆರೆಯ ಪದ್ಮರಸ ತೀರ್ಥಂಕರನಲ್ಲ. ಆದರವನು ಜಿನಭಕ್ತ. ಆದ್ದರಿಂದ ಅವನ ಚರಿತವನ್ನು ಪದ್ಮಪುರಾಣವೆಂದು ಕರೆಯಲಾಗಿದೆ. ಭೀಮಕವಿ (1369) ಬಸವ ಪುರಾಣವನ್ನು ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದಾನೆ. ಇದರಲ್ಲಿರುವ 8 ಆಶ್ವಾಸಗಳ 61 ಸಂಧಿಗಳ 3621 ಪದ್ಯಗಳಲ್ಲಿ ವೀರಶೈವ ಮತಧರ್ಮ ಪ್ರವರ್ತಕನಾದ ಬಸವೇಶ್ವರನ ಚರಿತವನ್ನು ವಿವರಿಸಲಾಗಿದೆ. ನಾಗಚಂದ್ರ (ಸು. 1100) ಪಂಪ ರಾಮಾಯಣವೆಂದು ಪ್ರಸಿದ್ಧವಾಗಿರುವ ರಾಮಚಂದ್ರ ಚರಿತ ಪುರಾಣವನ್ನೂ 19 ನೆಯ ತೀರ್ಥಂಕರನಾದ ಮಲ್ಲಿನಾಥನ ಚರಿತೆಯನ್ನು ಮಲ್ಲಿನಾಥ ಪುರಾಣವೆಂಬ ಹೆಸರಿನಿಂದಲೂ ಬರೆದ. ಮಲ್ಲಿನಾಥ ಪುರಾಣದ ಆಶ್ವಾಸಗಳು 14. ಸುಮಾರು 1180 ರಲ್ಲಿ ಕೇಶವ ರಾಜ ಮತ್ತು ಅವನ ಮಗ ಚಾವಣ (ಸು. 1195) ವರ್ಧಮಾನ ಪುರಾಣವನ್ನು ಬರೆದರು. ವರ್ಧಮಾನ 24 ನೆಯ ತೀರ್ಥಂಕರ. ಅಗ್ಗಳ (1189) ಚಂದ್ರಪ್ರಭ ಪುರಾಣವನ್ನು ರಚಿಸಿದ. ಅದರಲ್ಲಿ 16 ಆಶ್ವಾಸಗಳಿವೆ. ಚಂದ್ರಪ್ರಭ 8 ನೆಯ ತೀರ್ಥಂಕರ. ಶಿವಕವಿದೇವ (1340) ವಸ್ತುಕ ರೂಪವಾದ ಒಂದು ಬಸವ ಪುರಾಣವನ್ನು ಬರೆದನೆಂದು ತಿಳಿದುಬರುತ್ತದೆ. ಕಮಲಭವ (1235) ಶಾಂತೀಶ್ವರ ಪುರಾಣವನ್ನು ಬರೆದಿದ್ದಾನೆ. ಇದರ 16 ಆಶ್ವಾಸಗಳಲ್ಲಿ 16 ನೆಯ ತೀರ್ಥಂಕರನಾದ ಶಾಂತಿನಾಥನ ಚರಿತವನ್ನು ವರ್ಣಿಸಲಾಗಿದೆ. ರಾಘವಾಂಕ (1165) ಸೊನ್ನಲಾಪುರದ ಸಿದ್ಧರಾಮನೆಂಬ ವೀರಶೈವ ಭಕ್ತನ ಚರಿತವನ್ನು ಸಿದ್ಧರಾಮಪುರಾಣವೆಂಬ ವಾರ್ಧಕ ಷಟ್ಪದಿ ಗ್ರಂಥದಲ್ಲಿ ಹೇಳಿದ್ದಾನೆ.

	ರಾಮಚಂದ್ರ ಗುರುಶಿಷ್ಯನೆಂಬ ಕವಿ (ಸು. 1550) ಆದಿತ್ಯ ಪುರಾಣವನ್ನು ಬರೆದಿದ್ದಾನೆ. ಇದರ ಸಂಧಿಗಳು 48 ಪದ್ಯಗಳು 2668, ಛಂದಸ್ಸು ಭಾಮಿನಿಷಟ್ಪದಿ ಈ ಪುರಾಣವನ್ನು ಮೊದಲು ಸೂರ್ಯ ವೈವಸತ್ವನಿಗೂ ಆಮೇಲೆ ಸೂತ ಋಷಿಗಳಿಗೂ ಹೇಳಿದನಂತೆ. ಬಸವಲಿಂಗ ಕವಿ (1679) ಕೊಟ್ಟೂರು ಬಸವೇಶ್ವರ ಪುರಾಣವನ್ನು ಬರೆದ. ಇದರ ಛಂದಸ್ಸು ವಾರ್ಧಕ ಷಟ್ಪದಿ. ಇದರಲ್ಲಿರುವುದು ಕೊಟ್ಟೂರು ಬಸವೇಶ್ವರನೆಂಬ ಶಿವಭಕ್ತನ ಚರಿತೆ. ಸಂಪಾದನೆಯ ಪರ್ವತೇಶ್ವರ (1698) ಚತುರಾಚಾರ್ಯ ಪುರಾಣವನ್ನು ವಾರ್ಧಕದಲ್ಲಿ ರಚಿಸಿದ. ರೇಣುಕ, ಮರುಳುಸಿದ್ಧ, ಏಕೋರಾಮ, ಪಂಡಿತಾರಾಧ್ಯರೇ ಉಕ್ತ 4 ವೀರಶೈವಾಚಾರ್ಯರು. ವಿರೂಪಾಕ್ಷ ಪಂಡಿತ (1584) ಚನ್ನಬಸವ ಪುರಾಣವೆಂಬ ಗ್ರಂಥದಲ್ಲಿ ಬಸವೇಶ್ವರನ ಸೋದರಿ ನಾಗಾಲಾಂಬಿಕೆಯ ಪುತ್ರನಾದ ಚನ್ನಬಸವನ ಚರಿತೆಯನ್ನು ವಾರ್ಧಕದಲ್ಲಿ ವಿವರಿಸಿದ. ಶಾಂತೇಶ (1561) ಭಾಮಿನಿಯಲ್ಲಿ ತೋಂಟದ ಸಿದ್ದೇಶ್ವರನ ಪುರಾಣವನ್ನು ನಿರ್ಮಿಸಿದ ವಿರಕ್ತ ತೋಂಟಾದಾರ್ಯ (1560) ವಾರ್ಧಕದಲ್ಲಿ ಸಿದ್ಧೇಶ್ವರ ಪುರಾಣವನ್ನೂ ಪಾಲ್ಕುರಿಕೆ ಸೋಮೇಶ್ವರ ಪುರಾಣವನ್ನೂ ಬರೆದ. ಹರೀಶ್ವರ (1606) ವಿವಿಧ ಷಟ್ಪದಿಗಳಲ್ಲಿ ಪ್ರಭುದೇವರ ಪುರಾಣವನ್ನು ರಚಿಸಿದ. ಸಿದ್ಧಲಿಂಗ ಶಿವಯೋಗಿ (1600) ಭೈರವೇಶ್ವರ ಪುರಾಣವನ್ನು ಚಂಪುವಿನಲ್ಲಿ ಬರೆದ. ಚನ್ನಬಸವಾಂಕ (1550) ಮಹಾದೇವಿಯಕ್ಕನ ಪುರಾಣವನ್ನು ರಚಿಸಿದ. 

	ಚತುರ್ಮುಖ ಬೊಮ್ಮರಸ (1500) ರೇವಣ ಸಿದ್ಧೇಶ್ವರ ಪುರಾಣವನ್ನು ನಿರ್ಮಿಸಿದ. ಇದು ವಾರ್ಧಕದಲ್ಲಿದೆ. ಚಿಕ್ಕುಪಾಧ್ಯಾಯ (1672) ಚಂಪೂ ರೂಪದಲ್ಲಿ ವಿಷ್ಣು ಪುರಾಣವನ್ನು ಬರೆದ. ಇದೇ ವಿಷ್ಣು ಪುರಾಣವನ್ನು ಗದ್ಯದಲ್ಲೂ ಬರೆದಿದ್ದಾನೆ. ಗುಬ್ಬಿಯ ಮಲ್ಲಣ್ಣಾರ್ಯ (1513) ವೀರಶೈವಾಮೃತ ಪುರಾಣವನ್ನು ಬರೆದ. ಗುರುಪ್ರಸಾದ ಕವಿ (1650) ಸುಯೋಗ ಚಾರಿತ್ರ ಅಥವಾ ವೈರಾಗ್ಯ ಪುರಾಣ ಎಂಬ ಗ್ರಂಥವನ್ನು ವಾರ್ಧಕದಲ್ಲಿ ಬರೆದ. ಬಸವಲಿಂಗ (1611) ಶಿವಾಧಿಕ್ಯ ಪುರಾಣವನ್ನು ವಾರ್ಧಕದಲ್ಲಿ ರಚಿಸಿದ. 

	ಬೊಮ್ಮರಸ (1450) ಸೌಂದರ ಪುರಾಣವನ್ನು ರಚಿಸಿದ. ಇದರಲ್ಲಿ ಸೌಂದರೇಶ ಅಥವಾ ನಂಬಿಯಣ್ಣ ಎಂಬ ವೀರಶೈವ ಭಕ್ತನ ಚರಿತ್ರೆ ಇದೆ. ಹಾಲಾಸ್ಯಪುರಾಣವೆಂಬ ಚಂಪೂಗ್ರಂಥವನ್ನು ಹಿಮ್ಮಡಿ ಮುರಿಗೆಯ ಸ್ವಾಮಿ (1720) ಬರೆದಿದ್ದಾನೆ. 19 ನೆಯ ಶತಮಾನದಲ್ಲಿದ್ದು ವಿರೂಪಾಕ್ಷ ಪಂಡಿತ ಆಲಂದೆಯ ಶರಣ ಬಸವ ಪುರಾಣವನ್ನು ನಿರ್ಮಿಸಿ ಖ್ಯಾತನಾದ. ಚಂದ್ರಸಾಗರ ವರ್ಣಿ (1816) ಭಾಮಿನೀ ಷಟ್ಪದಿಯಲ್ಲಿ ಕದಂಬ ಪುರಾಣವನ್ನು ಮುಗಿಸಿದ. ಗೊರೂರು ನರಸಿಂಹಾಚಾರ್ಯ 19 ನೆಯ ಶತಮಾನದಲ್ಲಿ ಕಾವೇರಿ ಪುರಾಣವನ್ನು ಸಾಂಗತ್ಯದಲ್ಲಿ ಬರೆದ. ದೇವನು (1725) ದೇವಾಂಗ ಪುರಾಣವನ್ನು ಸಾಂಗತ್ಯದಲ್ಲಿ ಬರೆದ. ವೀರಣ್ಣಾರ್ಯ (1650) ನಂಜುಂಡೇಶ್ವರ ಪುರಾಣವನ್ನು ಭಾಮಿನಿಯಲ್ಲಿ ವಿರಚಿಸಿದ. ಮಹಾದೇವ (1725) ಭಾಮಿನಿಯಲ್ಲಿ ಬ್ರಹ್ಮೋತ್ತರ ಖಂಡವೆಂಬ ಸಂಸ್ಕøತ ಪುರಾಣವನ್ನು ಕನ್ನಡಕ್ಕೆ ಭಾಷಾಂತರಿಸಿದ. 

	ಚಂದ್ರಸಾಗರ ವರ್ಣಿ (1810) ಬಿಜ್ಜಣರಾಯ ಪುರಾಣವನ್ನು ಭಾಮಿನಿಯಲ್ಲಿ ಬಿತ್ತರಿಸಿದ. ಕಳಲೆ ನಂಜರಾಜ (1740) ಮಾರ್ಕಂಡೇಯ ಪುರಾಣವನ್ನು ಬರೆದ. ಸುಮಾರು 1750 ರಲ್ಲಿದ್ದ ಬೇಟೆರಾಯನೂ ಪೂರ್ವೋಕ್ತ ಪುರಾಣವನ್ನು ರಚಿಸಿದ. ಇದರಲ್ಲಿ ಮೃಕಂಡು ಮುನಿ ಮಾರ್ಕಂಡೇಯನಿಗೆ ಬೋಧಿಸಿದ. ಜ್ಯೋತಿಃಶಾಸ್ತ್ರವನ್ನು ವಿವರಿಸಲಾಗಿದೆ. ಸಿದ್ಧಲಿಂಗ (1860) ಶಿವಯೋಗೀಶ್ವರ ಪುರಾಣವನ್ನು ಭಾಮಿನಿಯಲ್ಲಿ ಬರೆದ. 19 ನೆಯ ಶತಮಾನದ ಬಿ. ನರಸಿಂಹಯ್ಯ ಶ್ರೀ ಸೂತಪುರಾಣವನ್ನು ನಿರ್ಮಿಸಿದ.

	ಪುರಾಣಗಳ ಚರಿತ್ರೆ ಅಥವಾ ಚರಿತ ಎಂಬುದು ಯಾರ ಹೆಸರಿನಲ್ಲಿದ್ದರೂ ಪೌರಾಣಿಕವೇ ಪುರಾಣದ ಐತಿಹಾಸಿಕತೆ ಅಲ್ಪ ; ಅದರ ಕಾಲ್ಪನಿಕತೆಯ ಅದ್ಭುತ ವೈಭವ ಉಪಮಾತೀತ. ಅದು ಯಾವ ಭಾಷೆಯಲ್ಲಿದ್ದರೂ ಸರಿಯೆ ; ಅದರ ಪಾತ್ರಗಳ ಗಾತ್ರಗಳೂ ಶಕ್ತಿಗಳೂ ಅತಿಶಯೋಕ್ತಿ ಅತ್ಯುಕ್ತಿಗಳನ್ನು ಕೆಲವೊಮ್ಮೆ ಮೀರಿರುತ್ತದೆ. ಭೀಮ, ಬಕಾಸುರ, ಅಟ್ಲಾಸ್, ತಾಟಕಿ, ಘಟೋದ್ಕಚ, ರಾವಣ, ಕುಂಬಕರ್ಣ, ಹನುಮಂತ ಮುಂತಾದ ಪಾತ್ರಗಳಲ್ಲದೆ ಹರಿಹರರ ಎಷ್ಟೋ ಅವತಾರಗಳೂ ಅವು ಸಂಹರಿಸಿದ ದಾನವ ಪಾತ್ರಗಳೂ ಮಾನವೀಯ ಅಳತೆಗಳನ್ನು ನೂರು ಪಟ್ಟು ಮಿಗುವ ಅತಿಶಯವನ್ನು ಹೊಂದಿವೆ. ಅವುಗಳಲ್ಲಿ ಕೆಲವನ್ನು ಮಾನವ ಸ್ವರೂಪ ಉಳ್ಳವುಗಳೆಂದು ಕವಿಗಳು ಹೇಳಿದ್ದರೂ ಅವುಗಳ ಕೃತಿಗಳು ಅಣಿಮಾದಿ ಅಷ್ಟಸಿದ್ಧಿಗಳನ್ನು ಪ್ರದರ್ಶಿಸುವ ಪವಾಡ ಪುರುಷರೆನ್ನಿಸಿದವರು ಮಾಡಬಲ್ಲರೆಂದು ಹೇಳುವ ಕೃತಿಗಳಿಗೆ ಸರಿಸಮಾನವಾದಂತವುಗಳಾಗಿರುತ್ತವೆ. 

	ಮಾನವ ಪ್ರಪಂಚದ ಒಳಿತಿನ ಮತ್ತು ಕೇಡಿನ ಶಕ್ತಿಗಳ ಅಳತೆಯನ್ನು ಆಕಾಶದಗಲಕ್ಕೆ ಎಂಬಷ್ಟು ಅತಿಶಯಿಸಿ ಹೇಳುವ ಪುರಾಣ ಕಲೆಯ ಸಾಫಲ್ಯ ಸಾಮಾನ್ಯ ಮುಗ್ಧ ಜನಕೋಟಿಗೆ ಕಣ್ಣಿಗೆ ಕಟ್ಟುವಂತೆ ಮೂರ್ತತೆಯನ್ನಾಧರಿಸಿ ಅವರ ಸ್ವಭಾವ ಲಕ್ಷಣಗಳನ್ನು ಅವುಗಳ ಪರಿಣಾಮಗಳನ್ನು ಮನಂಬುಗಿಸುವುದರಲ್ಲೇ ಇದೆ ರಾಮಾಯಣ, ಮಹಾಭಾರತ, ಈಲಿಯಡ್, ಒಡಿಸಿಗಳು ಪುರಾಣ ಮಹಾಕಾವ್ಯಗಳು, ಇವುಗಳಲ್ಲಿ ಐತಿಹಾಸಿಕ ಅಂಶಗಳು ಕಡ್ಡಿಯಷ್ಟಿದ್ದರೆ ಪೌರಾಣಿಕ ಅಂಶಗಳು ಗುಡ್ಡದಷ್ಟಿವೆ. ಇವುಗಳಲ್ಲದೆ ಭಾರತದಲ್ಲಿ ಅಷ್ಟಾದಶ ಪುರಾಣಗಳೂ ನೂರಾರು ಉಪಪುರಾಣಗಳೂ ಹಾಗೇ ಅಲ್ಪ ಐತಿಹಾಸಿಕತೆಯನ್ನುಳ್ಳಂತವುಗಳೇ ಆಗಿವೆ. 

	ಜಗತ್ತೆಲ್ಲವೂ ಜಲಪ್ರಳಯಕ್ಕೆ ತುತ್ತಾದಾಗ, ಆಲದೆಲೆಯ ಮೇಲೆ ಬಾಲಕೃಷ್ಣ ತೇಲುತ್ತಿರುವನೆಂಬ ಪೌರಾಣಿಕ ಕಲ್ಪನೆಯ ಸೌಂದರ್ಯ ಬಹಳ ಆಕರ್ಷಕವಾಗಿದೆ. ಇಡಿ ಭೂಮಿಯನ್ನು ಹಿರಣ್ಯಾಕ್ಷಕ ಅಪಹರಿಸಿದಾಗ ವರಾಹಾವತಾರದಿಂದ ವಿಷ್ಣು ಅವನನ್ನು ಕೊಂದು ಅದನ್ನು ದುಷ್ಟಾಗ್ರದಲ್ಲಿ ಎತ್ತಿ ಹಿಡಿದ ಪವಾಡ ಅದ್ಭುತದ ಚರಮಾವಸ್ಥೆ, ಜಲಂಧರನ ಶಕ್ತಿಯನ್ನು ಕುಗ್ಗಿಸಲೆಂದು ಅವನ ಹೆಂಡತಿಯಾದ ತುಳಸಿಯ ಪಾತಿವ್ರತ್ಯವನ್ನು ಭಂಗಿಸಲು ವಿಷ್ಣು ಆಕಾಶಪಾತಾಳಗಳನ್ನು ಮುಟ್ಟುವ ದಿಗಂಬರ ವಿಗ್ರಹವಾಗಿ ತೋರಿದ ರೌದ್ರಾವತಾರದ ಪೌರಾಣಿಕ ಚಿತ್ರಕಲ್ಪನಾಶಕ್ತಿಯ ಪರಾಕಾಷ್ಠೆ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ತೋರಿಸಿದ ವಿಶ್ವರೂಪ ಅಂಥ ಇನ್ನೊಂದು ಮಹಾದ್ಭುತ. ಶಿವನ ತ್ರಿಪುರದಹನದ ಕಥೆ ಅದ್ಭುತದ ಇನ್ನೊಂದು ಮಹಾವೈಭವ. ವೀರಭದ್ರ ಮಾಡಿದ ದಕ್ಷಾಧ್ವರಧ್ವಂಸವೂ ಅಂಥದೆ. ನವರಾತ್ರಿಯ ದೇವೀಮಹಾತ್ಮ್ಯ ಅದಕ್ಕೆ ಹೊಯ್ ಕೈಯ್ ಇಂಥ ಅದ್ಭುತ, ಭಯಂಕರ ದೇವ-ದಾನವ ಲೀಲೆಗಳು ಪುರಾಣಕಾವ್ಯ ಪ್ರಪಂಚದಲ್ಲಿ ಅಸಂಖ್ಯಾತ.

	ಸ್ಯಾಮ್‍ಸನ್ ಮತ್ತು ಹಕ್ರ್ಯುಲೀಸರು ಯಹೂದಿ ಅತಿಮಾನುಷ ಬಲಭೀಮರು, ಅಕಿಲಸ್ ಮತ್ತು ಯೂಲಿಸಿಸ್ಸರು ಅಂಥ ಗ್ರೀಕ್ ವೀರರು ಲ್ಯಾಟಿನ್ ಸಾಹಿತ್ಯದಲ್ಲಿ ಪ್ರಸಿದ್ಧನಾದ ಕ್ಯುಪಿಡ್ ಭಾರತೀಯ ಮನ್ಮಥನ ಮಾದರಿ. ಗ್ರೀಕ್ ಕವಿ ಹೀಸೀಅಡ್ ಬರೆದ ದೇವತೆಗಳ ಅವತರಣ (ತ್ರಿಯೋಗನಿ) ಎಂಬ ಪುರಾಣಕಾವ್ಯ ವಿವಿಧ ದೇವಪಾತ್ರಗಳ ಕಥೆಗಳನ್ನು ಹೇಳುತ್ತದೆ.

	ಅತಿಮಾನುಷ ಪರಾಕ್ರಮದ ಮಾನವಸದೃಶ ಪಾತ್ರಗಳಲ್ಲದೆ ಪುರಾಣಕಾವ್ಯಗಳು ಚಿತ್ರವಿಚಿತ್ರ ಆಕೃತಿಗಳುಳ್ಳ ಅತಿಮಾನುಷಶಕ್ತಿಯ ಪ್ರಾಣಿ ಪಕ್ಷಿ ಗಿರಿ ಸರ್ಪ ವೃಕ್ಷ ನದಿ ಸಮುದ್ರ ಮುಂತಾದ ಪಾತ್ರಗಳ ಪರಿಚಯವನ್ನು ಮಾಡಿಸುತ್ತವೆ. ಶರಭ ಮೂರು ಕೋಡು ಮತ್ತು ಎಂಟು ಕಾಲುಗಳನ್ನುಳ್ಳ ಕಾಲ್ಪನಿಕ ಪ್ರಾಣಿ. ಗರುಡ ಅಸಾಧಾರಣ ಬಲದ ಪಕ್ಷಿ, ಮೇರು ಬಂಗಾರದ ಪರ್ವತ, ಆದಿಶೇಷ ಸಾವಿರ ಹೆಡೆಗಳನ್ನುಳ್ಳ ಸರ್ಪ, ಅಸಿಪತ್ರವೃಕ್ಷ ನರಕದಲ್ಲಿರುವ ವಿಚಿತ್ರವಾದ ಮರ, ಅಲಕನಂದೆ ದೇವಲೋಕದ ನದಿ, ಕ್ಷೀರಸಮುದ್ರ ನಾರಾಯಣನ ಆವಾಸ, ವಾಲಿಖಿಲ್ಯರೆಂಬ 60 ಸಾವಿರ ಋಷಿಗಳೆಲ್ಲರೂ ಹೆಬ್ಬೆರಳಿನ ಗಾತ್ರದವರು. ನರಸಿಂಹನ ಮೈ ಮನುಷ್ಯನದು, ಮುಖ ಸಿಂಹದ್ದು. ರಾಹುವಿಗೆ ತಲೆ ಮಾತ್ರ ಇದ್ದರೆ ಕೇತುವಿಗೆ ಕಬಂಧ ಮಾತ್ರ. ಗಂಡಭೇರುಂಡಕ್ಕೆ ಎರಡು ತಲೆಗಳು. ದಶಕಂಠ ಹತ್ತು ತಲೆಗಳುಳ್ಳವ. ಕಿನ್ನರಕ್ಕೆ ಕುದುರೆಯ ಮುಖ ಮನುಷ್ಯನ ಮೈ. ಗ್ರೀಸಿನ ಸೆಂಟಾರ್ 4 ಕಾಲುಗಳಿಂದ ಓಡುವ ಮನುಷ್ಯ ರೂಪದ ಕುದುರೆ.

	ದೇವದಾನವರಲ್ಲಿ ಅನೇಕರಿಗೆ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯ ತಲೆ ಕೈ ಕಾಲುಗಳಿರುವುದನ್ನು ಪುರಾಣಗಳಲ್ಲಿ ಕಾಣಬಹುದು. ಪಾತ್ರಗಳ ದೃಷ್ಟಿಯಿಂದಲೂ ಅವುಗಳ ಕೃತಿಗಳ ದೃಷ್ಟಿಯಿಂದಲೂ ಪುರಾಣ ಪ್ರಪಂಚವೊಂದು ಮಾಯಾಬಜಾರವೆನ್ನಬಹುದು. ಕವಿಕಲ್ಪನೆಯ ನಿರಂಕುಶತೆಯ ಪರಾಕಾಷ್ಠೆಗೆ ಪುರಾಣ ಕಾವ್ಯಗಳು ನಿದರ್ಶನಗಳು. ಇತರ ಕಾವ್ಯ ವರ್ಗಗಳಾವುದರಲ್ಲೂ ಇಂಥ ಪರಾಕಾಷ್ಠೆ ಕಂಡುಬರದು. ದಕ್ಷಬ್ರಹ್ಮನಿಗೆ ಕುರಿಯ ತಲೆ ಗಣಪತಿಗೆ ಆನೆಯ ತಲೆ, ಇರುವುದು ಮತ್ತು ಬ್ರಹ್ಮ ವಿಷ್ಣುವಿನ ಹೊಕ್ಕುಳಲ್ಲಿ ಹುಟ್ಟಿರುವುದು ಮುಂತಾದ ಅನೇಕ ದೃಷ್ಟಾಂತಗಳು ಮೇಲಿನ ಮಾತನ್ನು ಸಮರ್ಥಿಸುತ್ತವೆ.

	ಪುರಾಣ ಕಾವ್ಯಗಳಲ್ಲಿ ಯಜ್ಞ ಪೂಜೆ ವ್ರತ ಮುಂತಾದವುಗಳಿಗೆ ಹಿನ್ನೆಲೆಯ ಸಮರ್ಥನೆಯನ್ನು ಕೊಡುವ ಉದ್ದೇಶವಲ್ಲದೆ, ಇತರ ಉದ್ದೇಶಗಳೂ ಅಡಗಿವೆ. ತತ್ತ್ವಜ್ಞಾನದ ಕಕ್ಷೆಯಲ್ಲಿ ಬರುವ ಆತ್ಮ ಪರಮಾತ್ಮ ಸೃಷ್ಟಿ ಸ್ಥಿತಿ ಲಯ ಕರ್ಮ ಪುನರ್ಜನ್ಮ ಮುಂತಾದವುಗಳ ಬಗೆಗಿನ ಪರಂಪರಾಗತವಾದ ನಂಬಿಕೆಗಳನ್ನು ಪ್ರಚುರಪಡಿಸುವುದರ ಮೂಲಕ ಜನರಲ್ಲಿ ನೀತಿ ನಿಯಮಗಳಿಗೆ ಬದ್ಧರಾಗಿ ಸಮಾಜ ಹಿತಬುದ್ಧಿಯಿಂದ ಬದುಕುವ ಪ್ರವೃತ್ತಿಯನ್ನು ಪ್ರೇರಿಸುವ ಉದ್ದೇಶವಿದೆ. ಪುರಾಣ ಕಾವ್ಯಗಳನ್ನು ಭಾರತದಲ್ಲಿ ಮಿತ್ರ ಸಂಮಿತಿಗೆ ಒಳಪಡಿಸಲಾಗಿದೆ; ಕರ್ತವ್ಯ-ಅಕರ್ತವ್ಯಗಳನ್ನು ಜನತಾಹಿತದ ದೃಷ್ಟಿಯಿಂದ ವ್ಯಕ್ತಿಗಳೂ ಗುಂಪುಗಳೂ ಚೆನ್ನಾಗಿ ಅರಿತುಕೊಳ್ಳಲು ಇಲ್ಲಿ ಅವು ಇತರ ದೇಶಗಳಲ್ಲಿಯಂತೆಯೆ ಸುಲಭ ಸಾಧನಗಳಾಗಿದ್ದವು. ಸಾಮಾಜಿಕ ಶಿಕ್ಷಣದ ಗುರಿಯನ್ನು ಮನೋರಂಜಕವಾದ ಅದ್ಭುತ ಪವಾಡಗಳ ಮೂಲಕ ಕೊಡುವುದು ಹಿಂದಿನ ಕಾಲದಲ್ಲಿ ಯಶಸ್ವಿಯಾಗಿತ್ತು. ಮೂರನೆಯದಾಗಿ ಐದಾರು ಸಾವಿರ ವರ್ಷಗಳ ಸಾತತ್ಯವುಳ್ಳ ಸುದೀರ್ಘವಾದ ಭಾರತೀಯ ನಾಗರಿಕತೆಯ ಇತಿಹಾಸದ ಸಂಗತಿಗಳ ಪಳೆಯುಳಿಕೆಗಳನ್ನು ಭದ್ರವಾಗಿ ಜನಮನದಲ್ಲಿ ಉಳಿಸಲು ಅವು ಕಾರಣವಾದುವು.

	ಗ್ರೀಕ್ ಪುರಾಣಗಳಲ್ಲಿ ದೇವಾಸುರರಿಗೆ ಮಾನವ ಸಹಜ ಗುಣಗಳನ್ನು ಅನ್ವಯಿಸಿದ್ದು ಕಂಡು ಬಂದರೆ, ಭಾರತೀಯ ಪುರಾಣಗಳಲ್ಲಿ ಧೀರೋದಾತ್ತ ಮತ್ತು ಧೀರೋದ್ಧತ ನಾಯಕ-ಪ್ರತಿನಾಯಕರಿಗೆ ಅತಿಮಾನುಷ ಶಕ್ತಿಗಳನ್ನು ಅನ್ವಯಿಸಿದ ಉದಾಹರಣೆಗಳು ಅಧಿಕ. ಆದುದರಿಂದ ಭಾರತದ ಪುರಾಣ ಕಾವ್ಯಗಳಲ್ಲಿ ಪ್ರಾಚೀನ ಸಾಮಾಜಿಕ ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಐತಿಹಾಸಿಕ ಅಂಶಗಳನ್ನು ಶೋಧಿಸಿ ನಿರ್ಧರಿಸುವ ಅವಕಾಶ ತುಂಬ ಇದೆ. ಇತಿಹಾಸ ವಿದ್ವಾಂಸರು ಆಗಲೇ ಈ ದಿಷೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದಾರೆ.

	ಪುರಾಣ ರಚನೆಯ ಕಲಾವೈಶಿಷ್ಟ್ಯವಿರುವುದು ಅನೈಸರ್ಗಿಕವೆಂದು ದೃಢವಾಗಿ ಪರಿಣಾಮ ಬೀರದಂತೆ ನಿಸರ್ಗಾಧಿಕ ಅಥವಾ ನಿಸರ್ಗೋತ್ತರ ಕೃತಿ-ಆಕೃತಿಗಳನ್ನು ಮಾನವರಿಗೆ ತೀರಾ ಅಸಹಜವಲ್ಲದ ಭಾವನಾಮಯ ಸನ್ನಿವೇಶಗಳಲ್ಲಿ ಕವಿ ಪ್ರತಿಭೆ ಮೂಡಿಸುವುದರಲ್ಲಿದೆ. ಲೌಕಿಕ ಕಾರ್ಯಕಾರಣಗಳ ನಿಯಮಗಳನ್ನು ಸಂಪೂರ್ಣ ಬಿಡದೆ ಹೋದರೂ ಅಲ್ಲಲ್ಲಿ ಅವುಗಳನ್ನು ಮೀರಿ ದೈವಿಕ ಅಥವಾ ದಾನವ ಶಕ್ತಿಗಳ ಬಲದಿಂದ ಮಹಾಘಟನೆಗಳು ಸಂಭವಿಸುವ ಸಂದರ್ಭಗಳು ಎದ್ದು ಕಾಣುವಂತೆ ಚಿತ್ರಿಸುವ ಯೋಜನೆ ಅಥವಾ ಸಂವಿಧಾನ ಪುರಾಣ ಸಹಜ. ಇದಕ್ಕೆ ಬಲಿ-ವಾಮನರ ಕಥೆಯೊಂದು ನಿದರ್ಶನ. ಅದರಲ್ಲಿ ತ್ರಿವಿಕ್ರಮಾವತಾರದ ಅದ್ಭುತ ಕೃತಿ ಪೌರಾಣಿಕ ಪ್ರತಿಭೆಯ ಕೇಂದ್ರಬಿಂದು. ಮಾನಸಿಕ ಪ್ರತಿಮಾರಚನೆಯ ಐಂದ್ರಜಾಲಿಕತೆಯನ್ನು ಪುರಾಣ ಕಾವ್ಯದಲ್ಲಿ ಕಾಣಲು ಶಕ್ಯವಾದ ಹಾಗೆ ಇತರ ಕಾವ್ಯ ಪ್ರಕಾರಗಳಲ್ಲಿ ಕಾಣಲು ಶಕ್ಯವಾಗದು. ಕಾಲಕ್ರಮೇಣ ಅಂಥ ಪಾತ್ರ ಅಥವಾ ಘಟನೆ ಮುಂದಿನ ಕವಿಗಳ ಕಾವ್ಯ ಶೈಲಿಗೆ ಅಪಾರ ಶಕ್ತಿಯನ್ನು ಕೊಡುವ ಪ್ರತೀಕ ಅಥವಾ ಪ್ರತಿಮೆಯಾಗಿ ಪರಿಣಮಿಸುತ್ತದೆ. ಸಮುದ್ರಮಥನದ ದೇವದಾನವ ಯುದ್ಧ ಜಗತ್ತಿನ ಒಳಿತಿನ ಮತ್ತು ಕೇಡಿನ ಶಕ್ತಿಗಳಿಗೆ ಶಾಶ್ವತವಾದ ಪ್ರತೀಕಗಳಾದುವು. ನಿದ್ರಾಮಯತೆಗೆ ಕುಂಭಕರ್ಣನೂ ಬಲಿಷ್ಠತೆಗೆ ಭೀಮ-ಹನುಮರೂ ರೂಪಕಗಳಾದರು. ಸಾಲಮನ್ನನೂ ಬೃಹಸ್ಪತಿಯೂ ಬುದ್ಧಿಶಕ್ತಿಯ ಪರಾಕಾಷ್ಠೆಯನ್ನು ಮುಟ್ಟಿದವರಿಗೆ ಪ್ರತಿನಿಧಿಗಳಾದರು. ತ್ಯಾಗದಲ್ಲಿ ಕರ್ಣ, ಭೋಗದಲ್ಲಿ ಇಂದ್ರ, ಸತ್ಯದಲ್ಲಿ ಹರಿಶ್ಚಂದ್ರರು ಉಪಮಾನ ಸ್ಥಾನ ಪಡೆದರು. ಅಹಲ್ಯೆ, ದ್ರೌಪದಿ, ಸೀತೆ, ತಾರೆ, ಮಂಡೋದರಿಯರು ಪಾತಿವ್ರತ್ಯದಲ್ಲಿ ಅಂಥ ಸ್ಥಾನವನ್ನು ಆಕ್ರಮಿಸಿದರು. ಜ್ಯೂಪಿಟರ್ ಹಣೆಯ ಚಂದಕ್ಕೆ, ಮಾರ್ಸ್ ಕಣ್ಣಿನ ವೀರದೃಷ್ಟಿಗೆ ಹೆಸರಾಂತರು. ಅಮೃತ ಹಾಗೂ ಆಮ್ರೋಸಿಯ (ನೆಕ್ಟರ್) ರುಚಿಕರ ಮತ್ತು ಆರೋಗ್ಯಕರ ಪೇಯಗಳಿಗೆ ಪರಮಾದರ್ಶಗಳೆನಿಸಿದುವು. ಸ್ವರ್ಗ (ಹೆವನ್) ಮತ್ತು ನರಕ (ಹೆಲ್) ಸುಖ-ದುಃಖಗಳ ಪರಮಾವಧಿಗೆ ಉದಾಹರಣೆಗಳಾದುವು. ಗ್ರಾಹ್ಯ-ತ್ಯಾಜ್ಯ ಗುಣಗಳೆರಡಕ್ಕೂ ತುತ್ತ ತುದಿಯ ದೃಷ್ಟಾಂತಗಳನ್ನು ಪುರಾಣಗಳು ಕೊಟ್ಟಿವೆ. ಅಲ್ಲಿ ಕಂಡುಬರುವ ಕಲ್ಪನಾ ಶಕ್ತಿಯ ಚರಮಸೀಮೆಯನ್ನು ಯಾವ ಹೊಸ ಕೃತಿಯೂ ಮುಟ್ಟಲಾರದು. 

	ಅತಿಶಯದ ಅತಿಶಯವನ್ನು, ಪುರಾಣವನ್ನು ಬಿಟ್ಟರೆ ಮತ್ತೆಲ್ಲಿಯೂ ಕಾಣಲು ಅಸಾಧ್ಯ. ಅಲಂಕಾರ ಪ್ರಸ್ಥಾನದ ಪ್ರವರ್ತಕನಾದ ಭಾಮಹಾಚಾರ್ಯ ರೂಪಕಾದಿ ಸರ್ವ ಅಲಂಕಾರಗಳಿಗೂ ಅತಿಶಯವೇ ಮೂಲಾಧಾರವೆಂದು ಸಾರಿದ್ದು ಇಲ್ಲಿ ಸ್ಮರಣೀಯ. ಪೌರಾಣಿಕ ಅತಿಶಯಮಾನದ ಪಾತ್ರ-ಸನ್ನಿವೇಶ-ಘಟನೆಗಳನ್ನು ಬಳಸಿಕೊಂಡು ಜನಪ್ರಿಯತೆಯನ್ನು ಕರ್ನಾಟಕದಲ್ಲಿ ಗಳಿಸಿದ ಯಕ್ಷಗಾನ ನಾಟಕ ಕಲೆ ಪೌರಾಣಿಕ ಕಲ್ಪನಾವೈಭವವನ್ನು ಸಾಕ್ಷಾತ್ತಾಗಿ ಪ್ರೇಕ್ಷಕರ ಕಣ್ಣೆದುರು ನಿಲ್ಲಿಸುತ್ತದೆ ; ನೃತ್ಯ ಗೀತ ವಾದಿತ್ರ ಅಭಿನಯ ಚತುಷ್ಟಯ ವೇಷ-ಭೂಷಣಗಳ ವೈಶಿಷ್ಟ್ಯಗಳ ಮೂಲಕ ಇದು ಪೌರಾಣಿಕ ಕವಿಪ್ರತಿಭೆಯ ಔಚಿತ್ಯವನ್ನು ರಸಿಕರಿಗೆ ಮನದಟ್ಟು ಮಾಡಿಕೊಡುತ್ತದೆ. 

	ಭಕ್ತಿ ಕರುಣ ಶೃಂಗಾರಗಳಿಗೆ ಹಾಸ್ಯವು ಮಾಧ್ಯಮವಾಗುವ ಸಂದರ್ಭಗಳಿರುವಂತೆ ಪುರಾಣಗಳಲ್ಲಿ ಸರ್ವರಸಗಳಿಗೂ ಭಾವಗಳಿಗೂ ಅದ್ಭುತ ಮಾಧ್ಯಮವಾಗುತ್ತದೆ. ಪುರಾಣದ ಅದ್ಭುತ ಪ್ರತಿಮೆಗಳು ಮಾನವ ಕುಲದ ಸುಪ್ತ ಸಂಸಾರ ಮುದ್ರೆಗಳೆಂದು ಕಾರ್ಲ್ ಜಿ. ಯಾಂಗ್ ಮಹಾಶಯನ ಮತ. ದೇಶ ವಿದೇಶಗಳಲ್ಲಿ ಅವುಗಳ ಹೊರರೂಪ ಅಲ್ಪಸಲ್ಪ ಭಿನ್ನವಾಗಿ ತೋರಿದರೂ ಅವುಗಳ ಅರ್ಥಸಾರ ಒಂದೇ ಆಗಿರುವುದಕ್ಕೆ ಅನೇಕ ನಿದರ್ಶನಗಳಿವೆ ; ಪ್ರಳಯ ಕಾಲದಲ್ಲಿ ಮನುವನ್ನು ಮೀನು ಬದುಕಿಸಿದ ಕಥೆ ಅಂಥ ಒಂದು ನಿದರ್ಶನ. ಇಂಥ ಪೌರಾಣಿಕ ಕಥೆಗಳು ಬೇರೆ ಬೇರೆ ಜನಾಂಗಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಸ್ತ ವಿವರಗಳಿಂದ ಪ್ರಚುರವಾಗಿರುವುದು ಕಂಡುಬಂದಿದೆ. ಆದುದರಿಂದ ಮಾನವರ ವಿವಿಧ ನಾಗರಿಕತೆಗಳ ಇತಿಹಾಸದ ಒಂದಲ್ಲ ಒಂದು ಅವಧಿ ಪುರಾಣ ರಚನೆಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿರುವುದು ಸ್ಪಷ್ಟ. ನಾಗರಿಕತೆಯ ಪರಿವರ್ತನದ ಪ್ರಕಾರಾಂತಗಳಲ್ಲಿ ಪುರಾಣ ಕಥಾರಚನೆಯ ಕವಿಗಳಿಗೆ ದೇಶದಲ್ಲಿ ಅಗ್ರ ಪ್ರಾಶಸ್ತ್ಯ ದೊರೆತದ್ದೂ ಆ ಮೂಲಕ ಅವರು ತಮ್ಮ ಕಾಲಾವಧಿಯಲ್ಲಿ ತಮ್ಮ ಇಡೀ ಜನಾಂಗದ ವೃತ್ತಿ-ಪ್ರವೃತ್ತಿಗಳನ್ನು ಮತಧರ್ಮ ಕಲಾಕ್ಷೇತ್ರ ಮತ್ತು ಸಮಾಜ ಶಿಕ್ಷಣಗಳಲ್ಲಿ ಸಂಸ್ಕರಿಸುತ್ತ ಹೋದದ್ದೂ ಅವಿಸ್ಮರಣೀಯವಾಗಿದೆ. 			(ಬಿ.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ